ಹಾಸನ: 2023-24ನೇ ಸಾಲಿಗೆ ನಗರಸಭೆಗೆ ೧೩೪೨೫. ೫೦ ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದ್ದು, 3.12 ಕೋಟಿ ಉಳಿತಾಯ ಬಜೆಟ್ ಅನ್ನು ನಗರಸಭೆ ಅಧ್ಯಕ್ಷ ಆರ್.ಮೋಹನ್ ಶುಕ್ರವಾರ ಮಂಡಿಸಿದರು.
ಬಜೆಟ್ ಪೂರ್ವ ನಗರದ ಹಿರಿಯರು ಸಾರ್ವಜನಿಕರು ಅಭಿಪ್ರಾಯವನ್ನು ಸಂಗ್ರಹಿಸಿ 2023-24ನೇ ಸಾಲಿನ ಆಯ-ವ್ಯಯ ಬಜೆಟ್ ಅನ್ನು ಮಂಡಿಸಲಾಗಿದ್ದು, ಆಸ್ತಿ ತೆರಿಗೆಯಿಂದ 1,600 ಲಕ್ಷ, ಕಟ್ಟಡ ಪರವಾನಗಿ 250 ಲಕ್ಷ, ನೀರು ಸರಬರಾಜು 500 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ 1452 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 1300 ಲಕ್ಷ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 500 ಲಕ್ಷ ಸೇರಿದಂತೆ ಆದಾಯ ಮೂಲವನ್ನು ದೃಢೀಕರಿಸಲಾಗುತ್ತಿದೆ ಎಂದರು.
ನಗರಸಭೆ ವ್ಯಾಪ್ತಿಯ ಒಳಚರಂಡಿ, ನೂತನ ಕಚೇರಿ ಕಟ್ಟಡ ನಿರ್ಮಾಣ, ಕಸಾಯಿ ಖಾನೆ ನಿರ್ಮಾಣ ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ, ನಗರದ ಹಸಿರೀಕರಣ, ಪಾರ್ಕ್ ಅಭಿವೃದ್ಧಿ, ಪಾರಂಪರಿಕ ಮತ್ತು ಇತಿಹಾಸವುಳ್ಳ ದನಗಳ ಜಾತ್ರಾ ಮಹೋತ್ಸವಕ್ಕೆ, ಚಿನ್ನರ ಮೇಳ ಬೇಸಿಗೆ ಶಿಬಿರ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳಿಗೆ ಸೇರಿದಂತೆ ಸಿಸಿ ಕ್ಯಾಮೆರಾ ಅಳವಡಿಕೆ, ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಇಂತಿಷ್ಟು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
15ನೇ ಹಣಕಾಸು ಆಯೋಗದ ಅನುದಾನದಲ್ಲಿ ಹಾಸನ ನಗರದ ಗೊರೂರು ರಸ್ತೆ ಎಪಿಎಂಸಿ ಯಾರ್ಡ್ ಪಕ್ಕ ಕಾಂಪೋಸ್ಟ್ ಕಸ ವಿಲೇವಾರಿ ಮಾಡುವ ಗೋಡೆ ನಿರ್ಮಾಣ ಕಾಮಗಾರಿ, ನಗರದ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಅಗಿಲೆ ನೆಲಭರ್ತಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಗಳ ಪ್ರದೀಪ, ಪೌರಾಯುಕ್ತ ಸಿ.ಆರ್ ಪರಮೇಶ್ವರಪ್ಪ, ಇತರೆ ಅಧಿಕಾರಿಗಳು ಹಾಜರಿದ್ದರು.