ಹಾಸನ: ಇಲಾಖೆಯ ಸಮೀಕ್ಷೆಯ ಪ್ರಕಾರ ಶೇ. 4೦ರಷ್ಟು ಮತದಾರರು ಇನ್ನೂ ಮತದಾರರ ಪಟ್ಟಿಗೆ ನೋಂದಣಿಯಾಗದಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್ ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರಕಾಲೇಜು – ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಯಾವ ನೀತಿ ನಿಯಮಗಳನ್ನು ಪಾಲಿಸಬೇಕು ಮತ್ತುಅದರಲ್ಲಿ ಲೋಪಗಳು ಕಂಡು ಬಂದರೆ ಅದನ್ನು ಸರಿಪಡಿಸುವುದರ ಕುರಿತು ಮಾಹಿತಿ ನೀಡಿದರು. ಆ. 24ರೊಳಗೆ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಸೇರಿಕೊಳ್ಳುವಂತೆ ಮತ್ತು ಗುರುತಿನ ಚೀಟಿ ತೆಗೆದುಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ.ಎಂ.ಬಿ. ಇರ್ಷಾದ್, ಪರೀಕ್ಷಾ ನಿಯಂತ್ರಕ ಡಾ. ಕೆ.ಡಿ. ಮುರುಳೀಧರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ವಿ. ಪಾರ್ಥೇಶ, ಕನ್ನಡ ವಿಭಾಗದ ಅಧ್ಯಾಪಕ ಡಾ. ದಿನೇಶ ಉಪಸ್ಥಿತರಿದ್ದು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರಶ್ಮಿ ಎ.ವಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ, ರಾಮಚಂದ್ರು, ಲೋಕೇಶ ಅವರನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಹಾಜರಿದ್ದರು.