ಆಲೂರು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭಾ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಸಂಶೆ ಮಾಡುವುದರಿಂದ, ಸದಾವಕಾಶಗಳನ್ನು ಒದಗಿಸುವುದರಿಂದ ಮಕ್ಕಳನ್ನು ಚೈತನ್ಯಶೀಲರನ್ನಾಗಿಸಲು ಸಾಧ್ಯ. ಸಾಧನೆಯ ದಿಶೆಯಲ್ಲಿ ಸಾಗುವ ಮಕ್ಕಳು ಧೈರ್ಯ, ಆತ್ಮಸ್ಥೈರ್ಯ ಮೈಗೂಡಿಸಿಕೊಂಡು ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಗುರಿ ತಲುಪಬೇಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಭೆ ಎಂಬುದು ಎಲ್ಲರಲ್ಲೂ ಅಡಗಿದ ಸುಪ್ತ ಪ್ರಭೆ, ಅದನ್ನು ಹೊರತಂದು ಸರಿಯಾದ ಮಾರ್ಗ ತೋರಿಸುವುದು ಪೋಷಕ, ಶಿಕ್ಷಕ ಹಾಗೂ ಸಮುದಾಯದ ಕರ್ತವ್ಯ. ಈ ದಿಸೆಯಲ್ಲಿ ನಮ್ಮ ಆಲೂರು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಎಚ್.ಇ.ದ್ಯಾವಪ್ಪ, ಟಿ.ಕೆ.ನಾಗರಾಜ, ಧರ್ಮ ಕೆರಲೂರು, ಡಿ.ಸಿ.ಬಸವರಾಜ ಹಾಗೂ ಗುಲಾಂ ಸತ್ತಾರ್ ಮುಂದಾಳತ್ವದಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸುವುದರ ಜೊತೆಗೆ ಮತದಾರರ ಚುನಾವಣೆ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದ ವಿಜ್ಞಾನ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪತ್ರಕರ್ತ ಎಚ್.ಡಿ.ಪ್ರದೀಪ ಪುತ್ರಿ ೧೦ನೇ ತರಗತಿ ಬಿ ವಿಭಾಗದ ಕುಮಾರಿ ಮೋಧ ಡಿ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ೧೦ನೇ ತರಗತಿ ಬಿ ವಿಭಾಗದ ಕುಮಾರಿ ಪರಿಣಿತ ಮತ್ತು ಮತದಾರ ಚುನಾವಣೆ ಪ್ರಯುಕ್ತ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ೧೦ನೇ ತರಗತಿ ಬಿ ವಿಭಾಗದ ಕುಮಾರಿ ಅಂಬಿಕಾ ಸಿ.ಆರ್, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷ ಎಚ್.ಇ.ದ್ಯಾವಪ್ಪ ಮಾತನಾಡಿ, ಮನುಷ್ಯನನ್ನು ಬೌದ್ಧಿಕವಾಗಿ ವಿಕಸನ ಮಾಡಿ ಉತ್ತಮ ನಾಗರಿಕರನ್ನಾಗಿಸುವುದು ಶಿಕ್ಷಣ. ಆದ್ದರಿಂದ ಇಂದಿನ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವುದರೊಂದಿಗೆ ಭವಿಷ್ಯದ ಸದೃಢ ಸಮಾಜ ಕಟ್ಟಬಹುದಾಗಿದೆ. ಅಂಬೇಡ್ಕರ್‌ರವರು ಭಾರತದ ಬೃಹತ್ ಸಂವಿಧಾನ ಬರೆಯಲು ಅವರ ಅಗಾಧ ಓದು ಕಾರಣ. ವಿವೇಕಾನಂದರು ಜಗತ್ತಿಗೆ ಗುರುವಾಗಲು ಅವರ ಅಗಾಧ ಓದು ಕಾರಣ. ಆದ್ದರಿಂದ ಮಕ್ಕಳೇ ಓದಿನ ಕಡೆ ಹೆಚ್ಚಿನ ಆಸಕ್ತಿವಹಿಸಿ ಸಾಧನೆಯತ್ತ ಮುಖ ಮಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಡೆಯಿರಿ ಎಂದರು.
ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷ ಟಿ.ಕೆ.ನಾಗರಾಜ, ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ, ಮುಖ್ಯ ಶಿಕ್ಷಕ ವಿಜಯಕುಮಾರ, ಕಾರ್ಯದರ್ಶಿ ಧರ್ಮ ಕೆರಲೂರು, ಸಹ ಶಿಕ್ಷಕಿ ನೇತ್ರಾವತಿ, ಪತ್ರಕರ್ತ ಎಚ್.ಡಿ.ಪ್ರದೀಪ ಮುಂತಾದವರು ಹಾಜರಿದ್ದರು. ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.