ಹಾಸನ: ಶಿಕ್ಷಕರು ಮತ್ತು ಪೋಷಕರು ಸಮಾನ ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯಉಜ್ವಲವಾಗಿ ರೂಪುಗೊಳ್ಳುತ್ತದೆ ಎಂದು, ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಹೆಚ್.ವಿ.ರವಿಕುಮಾರ ತಿಳಿಸಿದರು.
ಅವರು ಇಂದು ಪಟ್ಟಣದ ಅರಕಲಗೂಡು ರಸ್ತೆಯಲ್ಲಿರುವ ಚಿಟ್ಟನ ಹಳ್ಳಿ ಹೌಸಿಂಗ್ ಬೋರ್ಡ್‌ನ ಶ್ರೀ ವೆಂಕಟೇಶ್ವರ ಎಜುಕೇಶನ್ ಟ್ರಸ್ಟ್ (ರಿ)ನ, ವಿವೇಕ ಶ್ರೀ ರಂಗ ಮಂಟಪದಲ್ಲಿ ಆಯೋಜಿಸಲಾಗಿದ್ದ, ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯ 12 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಚಿಣ್ಣರ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮೇಳದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ಹಂಬಲದಿಂದ ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿ ಅವರ ಭವಿಷ್ಯವನ್ನುಉತ್ತಮ ರೀತಿಯಲ್ಲಿ ನಿರ್ಮಿಸಲು ಶ್ರಮಿಸುತ್ತಿದ್ದು, ನಿಮ್ಮ ಪ್ರೋತ್ಸಾಹ ಮತ್ತು ಪಾಲ್ಗೊಳ್ಳುವಿಕೆಯಿಂದ ಶಿಕ್ಷಕರೂ ಸಹ ಸಮರ್ಪಣಾ ಮನೋಭಾವದಿಂದ ಸ್ಪಂದಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರುಮಾಡುವಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಅಗ್ರಗಣ್ಯವಾಗಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಮಕ್ಕಳು ಡಾ. ಶಿವಕುಮಾರ ಸ್ವಾಮಿಗಳು, ಡಾ. ಪುನೀತ್‌ರಾಜ್‌ಕುಮಾರ್, ಮತ್ತುಇತ್ತೀಚೆಗೆ ಅಗಲಿದ ಶ್ರೀ ಸಿದ್ದೇಶ್ವರ ಸ್ವಾಮಿಗಳಂತಹವರ ಆದರ್ಶಗಳನ್ನು, ಚಿಂತನೆಗಳನ್ನು ಮೈಗೂಡಿಸಿಕೊಂಡು ಜವಾಬ್ದಾರಿಯುತ ಪ್ರಜೆಗಳಾಗಿ, ಜೀವನದಲ್ಲಿ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಸಾಮಾಜಿಕವಾಗಿ ಜೀವನದಲ್ಲಿ ಮುಂದೆ ಬರಬೇಕೆಂದು ಕಿವಿಮಾತು ಹೇಳಿದರು, ನಮ್ಮಎಸ್.ವಿ.ಇ.ಎಂ.ಎಸ್. (SVEMS) ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಹಕಾರವನ್ನು ನೀಡಿದ ಎಲ್ಲಾ ಟ್ರಸ್ಟಿಗಳಿಗೆ, ಅಧ್ಯಾಪಕ ವೃಂದದವರಿಗೆ, ಮತ್ತುಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿತರಾದ ಹಿರಿಯ ಸಾಹಿತಿ, ಮಾಜಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗುಂಜೇವು ಅಣ್ಣಾಜಪ್ಪ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾಭ್ಯಾಸದ ಜೊತೆಗೆ ನಮ್ಮ ನಾಡು-ನುಡಿಯ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಮಕ್ಕಳಿಗೆ ಶಾಲೆಗಳಲ್ಲಿ ಅತ್ಯಗತ್ಯವಾಗಿ ತಿಳಿಸುವ ಮತ್ತು ಕಲಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ಅವರು ತಾವು ಹೊಳೆನರಸೀಪುರದ ಇತಿಹಾಸ ಮತ್ತು ಜನಾಂಗೀಯ ಅಧ್ಯಯನ ಎಂಬ 5೦೦ ಪುಟಗಳ ಗ್ರಂಥವನ್ನು ರಚಿಸಿದ್ದು, ನಮ್ಮ ಹೊಳೆನರಸೀಪುರದ ಸಾಂಸ್ಕೃತಿಕ ಮತ್ತು ಸಾಮಾಜಿಕ, ಪರಿಸರ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಿದ್ದು ವಿದ್ಯಾರ್ಥಿಗಳು ಅದನ್ನು ತಿಳಿದುಕೊಳ್ಳಬೇಕು ಮತ್ತು ಮಕ್ಕಳು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮೊಳಗಿನ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಂಡು ತಾವು ಕಲಿತ ಶಾಲೆಗೆ ಮತ್ತು ತಂದೆ ತಾಯಿಗಳಿಗೆ ಹಾಗೂ ಊರಿಗೆ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿ ಕೀರ್ತಿ ತರಬೇಕು ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಸಮಾರಂಭವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕ ಪರಿವೀಕ್ಷಕ ಸಿದ್ದರಾಜು ಉದ್ಘಾಟಿಸಿದರು. ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಗಣ್ಯರು ಸನ್ಮಾನಿಸಿದರು.
ಸಮಾರಂಭದಲ್ಲಿ ಎಸ್.ವಿ.ಇ.ಎಂ.ಎಸ್. ಸಂಸ್ಥೆಯ ಅಧ್ಯಕ್ಷ ಕೆ.ಮಂಜಶೆಟ್ಟಿ, ಉಪಾಧ್ಯಕ್ಷ ಹೆಚ್.ಎಸ್.ಕಾಂತರಾಜು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಸ್.ಅರುಣ್‌ಕುಮಾರ್, ಟ್ರಸ್ಟಿ ಶ್ರೀಮತಿ ಪುಷ್ಪಲತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಾಗರಾಜರಾವ್ ಬಿ.ಆರ್.ಸಿ. ಎಂ.ಶಿವಣ್ಣ.ಇ.ಸಿ.ಓ. ಹೆಚ್.ಆರ್.ಶಿವಸ್ವಾಮಿ, ಎಂ.ಎಸ್.ಸುರೇಶ್ ನಾಯಕ್, ಎಂ.ಎಸ್.ಕಾಂತರಾಜು, ಕೃಷ್ಣಮೂರ್ತಿ ಸಿ.ಹೆಚ್. ಸಿ.ಆರ್.ಪಿ. ಮತ್ತು ಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಇನ್ನಿತರರು ಉಪಸ್ಥಿತರಿದ್ದರು.