ಹಾಸನ: ನೂತನವಾಗಿ ಹಾಸನದಲ್ಲಿ ಪ್ರಾರಂಭಗೊಂಡ ಹಾಸನ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿಗಳಾಗಿ ಪ್ರೊ. ಟಿ.ಸಿ.ತಾರಾನಾಥ್ ಅವರು ಇಂದು ಹಾಸನದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಕ್ಯಾಂಪಸ್ ನಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಂದೆ ತಾಯಿಗಳ ಆಶೀರ್ವಾದ ಹಾಗೂ ಗುರುಗಳು ಹೇಳಿಕೊಟ್ಟ ವಿದ್ಯೆಯಿಂದಾಗಿ ನಾನು ಈ ದಿನ ಉನ್ನತ ಸ್ಥಾನಕ್ಕೆ ಏರಿದ್ದು, ಅವರೆಲ್ಲರಿಗೂ ನಮಿಸುತ್ತೇನೆ ಎನ್ನುತ್ತಾ, ಸಂಸ್ಕಾರ ಮತ್ತು ಶಿಕ್ಷಣದಿಂದ ರಾಷ್ಟ್ರ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಪ್ರತಿಯೊಂದು ಸಮಸ್ಯೆಗೂ ಪರಿಹಾರವಿರುತ್ತದೆ ಆದರೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ನಾವೆಲ್ಲರೂ ಒಡಗೂಡಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎನ್ನುತ್ತಾ, ಎಲ್ಲರೂ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪರಿಪಕ್ವವಾಗಿ ನಿರ್ವಹಿಸಿದಾಗ ಮಾತ್ರ ಹಾಸನ ವಿಶ್ವವಿದ್ಯಾನಿಲಯವನ್ನು ಉನ್ನತ ಮಟ್ಟಕ್ಕೆ ಏರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ನೌಕರ ಹಾಗೂ ನೌಕರೇತರ ವರ್ಗದವರು ಕಾರ್ಯನಿರ್ವಹಿಸುವುದರ ಮೂಲಕ ಸಹಕರಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಿಂದಲೇ ಶಿಕ್ಷಕರಿಗೆ ಗೌರವ ಹಾಗಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಶಿಕ್ಷಣವನ್ನು ನೀಡುವಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದರು. ಈ ವರ್ಷ ಪ್ರಾರಂಭವಾಗಿರುವ ಎಂಟು ವಿಶ್ವವಿದ್ಯಾನಿಲಯಗಳು ಪರಂಪರಾಗತ ವಿಶ್ವವಿದ್ಯಾನಿಲಯಗಳಿಗಿಂತ ಭಿನ್ನವಾಗಿ, ಸೀಮಿತ ಸಂಪನ್ಮೂಲಗಳನ್ನೇ ಉಪಯೋಗಿಸಿ ಕಾರ್ಯ ನಿರ್ವಹಿಸಿ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕೆಂದು ಹೇಳಿದರು.
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ಸುಜಾತ .ಸಿ ಹೂಗುಚ್ಛ ನೀಡುವ ಮೂಲಕ ಪ್ರೊ. ತಾರಾನಾಥ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಪ್ರೊ. ಎಮ್ ಜಿ ಮಂಜುನಾಥ್, ಪ್ರೊ. ಬಿ ಮಹದೇವಪ್ಪ, ಪ್ರೊ. ಪುಟ್ಟಸ್ವಾಮಿ, ಪ್ರೊ. ಎಂ ಶಂಕರ, ಪ್ರೊ. ಪಿ ಶರಣಪ್ಪ, ಪ್ರೊ. ಮಹದೇವ ಪ್ರಸಾದ್, ಪ್ರೊ. ಹಾಲಪ್ಪ ಗಾಜೆರ, ಪ್ರೊ. ಎ ಎಸ್ ರವೀಂದ್ರ ಬಾಬು, ಪ್ರೋ. ಕುಮಾರ ಸ್ವಾಮಿ ಹಾಗೂ ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸಂಶೋಧಕರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.