ಹಾಸನ: ಪ್ರತಿ ವಿಚಾರದಲ್ಲೂ ವೈಜ್ಞಾನಿಕವಾಗಿ ಯೋಚಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ತಿಳಿಸಿದರು.
ನಗರದ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಭಾರತ ಸೇವಾ ದಳ ಜಿಲ್ಲಾ ಸಮಿತಿ ಹಾಸನ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ವಿವೇಕಾನಂದ ಪ್ರೌಢಶಾಲೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವೈಜ್ಞಾನಿಕವಾಗಿ ಎಲೆಕ್ಟ್ರಿಕ್ ದೀಪವನ್ನು ಬೆಳಗಿಸುವುದರ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಾದವನು ಪ್ರತಿ ವಿಚಾರದಲ್ಲೂ ಊಹೆ ಮಾಡದೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಸಂತೋಷದಿಂದ ಇರಬಹುದು ಎಂದರು.
ಪ್ರಾಸ್ತಾವಿಕವಾಗಿ ವಿ.ಎಸ್. ರಾಣಿ ಮಾತನಾಡಿ, ಸೇವಾ ದಳದ ಪರಿಚಯದೊಂದಿಗೆ ವೈಜ್ಞಾನಿಕ ದಿನದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಗಿರಿಜಾಂಬಿಕಾ ಮಾತನಾಡುತ್ತಾ, ವಿಜ್ಞಾನದ ಇಂದಿನ ಕಾಲಘಟ್ಟದ ಮಹತ್ವದ ಬಗ್ಗೆ ಮಾತನಾಡಿದರು.
ಮತ್ತು ಉದ್ಯಮಿ ಮಮತಾ ಪಾಟೀಲ ಮಾತನಾಡಿ ಇಂದಿನ ವಾಸ್ತವ ಸಮಾಜದಲ್ಲಿ ವಿಜ್ಞಾನದ ಬೆಳವಣಿಗೆಗೆ ಮಾನವನ ಕೊಡುಗೆ ಎಷ್ಟಿದೆ ಎಂಬುದರ ಬಗ್ಗೆ ತಿಳಿಸಿದರು. ಮತ್ತು ಪ್ರೊಫೆಸರ್ ಚಂದ್ರಶೇಖರ, ವಿಜ್ಞಾನದ ಬಳಕೆ ಮತ್ತು ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ತಿಳಿಸಿದರು ಮತ್ತು ಸುನಿಲ್ ಪ್ರಾರ್ಥನೆಯನ್ನು ನೆರೆವೇರಿಸಿದರು. ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕರಾದ ಪಾರ್ಥಸಾರಥಿ ಸ್ವಾಗತಿಸಿದರು. ಮತ್ತು ವಿಜ್ಞಾನದ ಪ್ರಯೋಗವನ್ನು ಸಹ ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಿದರು. ಅಧ್ಯಕ್ಷತೆಯನ್ನು ವಿವೇಕಾನಂದ ಶಾಲೆಯ ಸಂಸ್ಥಾಪಕ ಉದಯ್ ಕುಮಾರ್ ವಹಿಸಿದ್ದರು. ರೇಖಾ ವಂದಿಸಿದರು.
ಮಕ್ಕಳಿಂದ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಸಿ.ವಿ. ರಾಮನ್ ಜೀವನ ಚರಿತ್ರೆಯ ಹಾಡುಗಳನ್ನು ಹಾಡಲಾಯಿತು ಮತ್ತು ಮುಖ್ಯ ಶಿಕ್ಷಕರು ರಚಿಸಿದ ವಿಜ್ಞಾನದ ಗೀತೆಗಳ ಸಾಹಿತ್ಯಕ್ಕೆ ನೃತ್ಯವನ್ನು ಸಹ ಅಭಿನಯಿಸಲಾಯಿತು. ನಂತರ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು. ಶಾಲಾ ಸಂಸ್ಥಾಪಕರಿಗೂ ಸಹ ಗೌರವಿಸಲಾಯಿತು. ಗಣ್ಯರಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.