ಹಾಸನ: ನಗರದ ಹೇಮ ಗಂಗೋತ್ರಿ ಸಭಾಂಗಣದಲ್ಲಿ “ಹಾಸನ ವಿಶ್ವ ವಿದ್ಯಾಲಯ”ವನ್ನು ನೂತನ ಕುಲಪತಿ ಫ್ರೋ. ತಾರಾನಾಥ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ವರ್ಚ್ಯುಯಲ್ ಮೂಲಕ ಉದ್ಘಾಟನೆ ಗೊಳ್ಳುತ್ತಿರುವ ೯ ವಿಶ್ವ ವಿದ್ಯಾಲಯಗಳ ಪೈಕಿ ಹಾಸನ ವಿಶ್ವ ವಿದ್ಯಾಲಯವೂ ಒಂದಾಗಿದ್ದು ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.
ಈ ಹಿಂದೆ ಸಂಸ್ಥೆಗಾಗಿ ದುಡಿದ ಅನೇಕರ ಶ್ರಮದ ಫಲವಾಗಿ ಇಂದು ವಿಶ್ವ ವಿದ್ಯಾನಿಲಯವಾಗಿ ಹೊರ ಹೊಮ್ಮುತ್ತಿದೆ. ಇಂದಿನಿಂದ ಹಾಸನ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು. ರಾಜ್ಯದ ಕಲೆ, ಸಂಸ್ಕೃತಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯು ಹಾಸನ ವಿಶೇಷ ಸ್ಥಾನ ಗಳಿಸಿದೆ. ರಸ, ಋಷಿಗಳ ನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ ಮೂರ್ತಿ ಮಾತನಾಡಿ, ವಿಶ್ವವಿದ್ಯಾನಿಲಯ ಎಂದರೆ ವಿಶ್ವಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿಯುತ ಸಂಸ್ಥೆ, ಆದುದರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕುಲಪತಿಗಳು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ೩೧ ವರ್ಷದ ಹಳೆಯ ಸ್ನಾತಕೋತ್ತರ ಕೇಂದ್ರ ಇಂದು ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಇದೊಂದು ಹಾಸನ ಜಿಲ್ಲೆಯ ಸಂಸ್ಕೃತಿಕ ಕೇಂದ್ರವಾಗಿ ಹೊರ ಹೊಮ್ಮಬೇಕಿದೆ. ಈ ನಿಟ್ಟಿನಲ್ಲಿ ಸುಸಜ್ಜಿತ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಸಿ.ಈ.ಸುಜಾತ, ಪ್ರೊ. ಮಂಜುನಾಥ, ಪ್ರೊ. ಮಹದೇವಪ್ಪ, ಪ್ರೊ. ಶಂಕರ, ಪ್ರೊ. ಮಹಾದೇವ ಪ್ರಸಾದ, ಪ್ರೊ. ರವೀಂದ್ರ ಬಾಬು, ಪ್ರೊ. ಪುಟ್ಟಸ್ವಾಮಿ, ಪ್ರೊ. ಹಾಲಪ್ಪ ಇತರರು ಇದ್ದರು.