ಹಾಸನ: ಜಿಲ್ಲೆಯ ಪ್ರತಿಷ್ಠೆ ಕಾಲೇಜುಗಳಲ್ಲಿ ಒಂದಾದ ಸರ್ಕಾರಿ ಕಲಾ-ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಯತ್ತ ನ್ಯಾಕ್ ಮೌಲ್ಯಮಾಪನ ಪಡೆದ ರಾಜ್ಯದ ಸ್ವಯತ್ತ ಕಾಲೇಜುಗಳಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಪ್ರಾಂಶುಪಾಲ ಟಿ. ಪಿ ಪುಟ್ಟರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ನೂತನ ಶಿಕ್ಷಣ ನೀತಿಯನ್ನು ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ಅಳವಡಿಸಿಕೊಳ್ಳಲಾಗಿದೆ. ಸ್ವಯತ್ತ ಸ್ಥಾನಮಾನವನ್ನು ಹೊಂದಿರುವ ಹಾಸನ ಕಾಲೇಜು ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ ಎಜುಕೇಶನ್ ವರ್ಲ್ಡ್ ಮತ್ತು 360 ಗೈಡ್ಲೈನ್ಸ್ ನಡೆಸಿದ ಸಮೀಕ್ಷೆಯ ರ‍್ಯಾಂಕ್ ಪಟ್ಟಿಯಲ್ಲಿ ರಾಷ್ಟ್ರದಲ್ಲಿ 7ನೇ ಸ್ಥಾನ ಮತ್ತು ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದರು. 2023-24ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಬಿಎ, ಬಿಕಾಂ, ಬಿಬಿಎ ತರಗತಿಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿದೆ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಗ್ರಂಥಾಲಯ, ಮಲ್ಟಿ ಜಿಮ್, ಕ್ರೀಡಾ ಸೌಲಭ್ಯ ಸೇರಿದಂತೆ ಕಲಿಕೆಗೆ ಪೂರ್ವಕವಾದ ವಾತಾವರಣವನ್ನು ಕಲ್ಪಿಸಲಾಗಿದೆ ಎಂದರು.
ಕಾಲೇಜಿಗೆ ಹೆಚ್ಚಿನ ಪ್ರಮಾಣದಲ್ಲಿ ಸಕಲೇಶಪುರ, ಚನ್ನರಾಯಪಟ್ಟಣ, ಆಲೂರು, ಬೇಲೂರು, ಅರಕಲಗೂಡು ಸೇರಿದಂತೆ ಜಿಲ್ಲೆಯ ಇತರ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ನಗರದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಹೊಂದುವ ಮೂಲಕ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಕಳೆದ ಬಾರಿ 20,850 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದ ದಾಖಲಾತಿಯ ನಿರೀಕ್ಷೆ ಹೊಂದಲಾಗಿದೆ. ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ, ಕ್ಯಾಂಪಸ್ ಸೆಲೆಕ್ಷನ್ ಯೋಜನೆ ಪ್ರತಿ ವರ್ಷ ರೂಪಿಸಲಾಗುತ್ತಿದೆ. ಕಳೆದ ಬಾರಿ 100 ಬಡ ವಿದ್ಯಾರ್ಥಿಗಳಿಗೆ 2,000 ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಇರ್ಷದ್, ಶ್ರೀನಿವಾಸ, ರಶ್ಮಿ ಇದ್ದರು.