ಅರಸೀಕೆರೆ: ಪಠ್ಯಪುಸ್ತಕದಿಂದ ದೊರೆಯುವ ಶಿಕ್ಷಣ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಹೆಚ್ಚಿಸಿದರೆ ಸಂಸ್ಕಾರಯುತ ಜೀವನ ಶೈಲಿ ಬದುಕಿನ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಆದಿಚುಂಚನಗಿರಿ ಪ್ರಾಥಮಿಕ ಆಂಗ್ಲ ಶಾಲೆಯಲ್ಲಿ ಆಯೋಜಿಸಿದ್ದ ಚುಂಚ ಸುರಭಿ-2023 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಶಾಲೆಯಲ್ಲಿ ಶಿಕ್ಷಕರಿಂದ ಪಾಠ ಪ್ರವಚನ, ಮನೆಯ ಹಿರಿಯರಿಂದ ನಯ ವಿನಯವನ್ನು ಮಕ್ಕಳು ಕಲಿಯುತ್ತಾರೆ ಹಾಗಾಗಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಹೇಗೆ ಮಹತ್ವ ಅದೇ ರೀತಿ ಮನೆಯಲ್ಲಿ ಪೋಷಕರ ನಡೆ ನುಡಿ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಶ್ರೀ ಮಠದ ಆಶ್ರಯದಲ್ಲಿ ನೂರಾರು ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಶಿಕ್ಷಣ ಮಾತ್ರ ನೀಡುವುದಿಲ್ಲ ಬದಲಾಗಿ ಭೈರವೈಕ್ಯ ಡಾ. ಬಾಲಗಂಗಾಧರ ಶ್ರೀಗಳ ಮಾರ್ಗದರ್ಶನದಂತೆ ತಂದೆ-ತಾಯಿ ಮತ್ತು ಗುರುಹಿರಿಯರನ್ನ ಗೌರವದಿಂದ ಕಾಣುವ, ಪರರ ನೋವು ನಲಿವಿಗೆ ಸ್ಪಂದಿಸುವಂತಹ ಮಾನವೀಯ ಮೌಲ್ಯ ಉಳ್ಳ ಸಂಸ್ಕಾರಯುತ ಶಿಕ್ಷಣವನ್ನು ಹೇಳಿಕೊಡಲಾಗುತ್ತದೆ. ಹಾಗಾಗಿ ನಮ್ಮಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಮನೆಗೆ ಮಾತ್ರ ಬೆಳಕಾಗುವುದಲ್ಲ ಸಮಾಜಕ್ಕೆ ಬೆಳಕಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ತಹಶೀಲ್ದಾರ ವಿಭಾ ವಿದ್ಯಾ ರಾಥೋಡ ಮಾತನಾಡಿ, ಸರ್ಕಾರದೊಂದಿಗೆ ಕೈಜೋಡಿಸಿ ಶಿಕ್ಷಣ ಕ್ಷೇತ್ರಕ್ಕೆ ನಾಡಿನ ಮಠ ಮಂದಿರಗಳು ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಅದರಲ್ಲೂ ಆದಿಚುಂಚನಗಿರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳು ಒಂದು ಜಾತಿ ಧರ್ಮ ಸಮುದಾಯಕ್ಕೆ ಸೀಮಿತವಾಗದೆ ಧಾರ್ಮಿಕ ಮಾರ್ಗದರ್ಶನದ ಜತೆಗೆ ಸಾವಿರಾರು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ನೀಡುತ್ತಾ ಬಡವರ ಮಕ್ಕಳ ಭವಿಷ್ಯ ಕಟ್ಟಿಕೊಡುತ್ತಿರುವ ಆದಿಚುಂಚನಗಿರಿ ಮಠದ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್. ಅನಂತಕುಮಾರ ಮಾತನಾಡಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಹಂಬಲ ಪ್ರತಿಯೊಬ್ಬ ಪೋಷಕರದ್ದು ಆಗಿರುತ್ತದೆ ಆದರೆ, ಇಷ್ಟಕ್ಕೆ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ ತಮ್ಮ ಮಕ್ಕಳು ಶಾಲೆ ಅಥವಾ ಕಾಲೇಜು ವಿದ್ಯಾರ್ಥಿಗಳಾಗಿರಲಿ ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ತಮ್ಮ ಮಕ್ಕಳು ದಾರಿ ತಪ್ಪಿದ ಮೇಲೆ ಕಳವಳ ಪಡುವುದಕ್ಕಿಂತ ಅವರು ದಾರಿ ತಪ್ಪದಂತೆ ನೋಡಿಕೊಳ್ಳುವುದು, ಶಿಕ್ಷಕರು ಮತ್ತು ಪೋಷಕರು ಮಾತ್ರವಲ್ಲ ಸಮಾಜದ ಜವಾಬ್ದಾರಿ ಕೂಡ ಆಗಿದೆ ಎಂದು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಆದಿಹಳ್ಳಿ ಆದಿಚುಂಚನಗಿರಿ ಶಾಖ ಮಠದ ಶಿವಪುತ್ರನಾಥ ಸ್ವಾಮೀಜಿ, ಗ್ರೇಡ್ 2 ತಹಶೀಲ್ದಾರ ಪಾಲಾಕ್ಷ, ತಾಲೂಕು ದೈಹಿಕ ಪರಿವೀಕ್ಷಕ ಶಿವಶಂಕರ, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗರಾಜು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ, ಶಾಲೆಯ ನಿರ್ದೇಶಕ ಚಂದ್ರಪ್ಪ, ಮತ್ತಿತರರು ಉಪಸ್ಥಿತರಿದ್ದರು.