ಹೊಳೆನರಸೀಪುರ: ವಿದ್ಯಾರ್ಥಿಗಳ ಜ್ಞಾನರ್ಜನೆಗೆ ಸಮರ್ಪಕವಾದ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಒದಗಿಸಿಕೊಟ್ಟಾಗ ಮಾತ್ರ ಅವರು ಸಾಧಕರಾಗಿ ಜೀವನದಲ್ಲಿ ಯಶಸ್ವಿಯಾಗುತ್ತಾರೆಂದು ಸಿ.ಆರ್.ಪಿ. ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣದ ಗ್ರೀನ್ ವುಡ್ ಆಂಗ್ಲ ಮಾಧ್ಯಮ ಶಾಲೆಯ 48ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಜ್ಞಾನ ಮತ್ತು ಉತ್ತಮ ನಡವಳಿಕೆಗಳು ಶಿಕ್ಷಣದ ಆಧಾರ ಸ್ಥಂಭಗಳು ಎಂಬ ಧ್ಯೇಯದೊಂದಿಗೆ ಪಟ್ಟಣದ ಗ್ರೀನ್ ವುಡ್ ಆಂಗ್ಲ ಮಾಧ್ಯಮ ಶಾಲೆಯು ಹಲವಾರು ವರ್ಷಗಳಿಂದ ತಾಲೂಕು ಮುಂಚೂಣಿಯಲ್ಲಿರುವ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಡಾಕ್ಟರ್, ಇಂಜಿನಿಯರ್, ಕ್ರೀಡಾಪಟುಗಳಾಗಿ, ಸರ್ಕಾರಿ ಕೆಲಸವನ್ನು ಪಡೆದು, ಖಾಸಗಿ ಸಂಸ್ಥೆಗಳಲ್ಲೂ ಉನ್ನತ ಹುದ್ದೆ ಪಡೆದು ಕೀರ್ತಿಯನ್ನು ತಂದಿದ್ದಾರೆ.
ಶಾಲೆಯಲ್ಲಿ ನುರಿತ ಅಧ್ಯಾಪಕ ವೃಂದದವರು ಮತ್ತು ಪೋಷಕ ಸಹಭಾಗಿತ್ವದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಅತ್ಯುತ್ತಮ ಗ್ರಂಥಾಲಯ ವ್ಯವಸ್ಥೆಯೊಂದಿಗೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಂಗೀತ ಪಾಠ, ಯೋಗಾಭ್ಯಾಸ ಮತ್ತು ವೈಜ್ಞಾನಿಕ ಮನೋಭಾವವನ್ನು, ಸಾಮಾಜಿಕ ಬದ್ಧತೆಯನ್ನು ಕಲಿಸುವ ಹೊಣೆಗಾರಿಕೆಯೊಂದಿಗೆ, ಶಾಲಾ ಆಡಳಿತ ಮಂಡಳಿಯ ಕಾರ್ಯವನ್ನು ನಿರ್ವಹಿಸುತ್ತಿರುವುದು ಅಭಿನಂದನೀಯ ಮತ್ತು ಕೋವಿಡ್ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ಶಿಕ್ಷಣವನ್ನು ನೀಡುವಲ್ಲಿ ಸಂಸ್ಥೆಯ ಗಣನೀಯವಾಗಿ ಶ್ರಮಿಸಿದ್ದು ಪ್ರಶಂಸನೀಯ ಮತ್ತು ವಿದ್ಯಾರ್ಥಿಗಳು ಪೋಷಕರು ಕಂಡ ಕನಸುಗಳನ್ನು ನನಸು ಮಾಡಲು ಗ್ರೀನ್ ವುಡ್ ಶಾಲೆಯು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ ಎಂದು ಶಾಲೆಯ ಸಾಧನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಶಾಲೆಯ ಅಧ್ಯಕ್ಷರಾದ ಇರ್ಷಾದ್ ಉಲ್ಲಾ ಬೇಗ್ ಉದ್ಘಾಟಿಸಿದರು,
ಸಮಾರಂಭದಲ್ಲಿ ಶಾಲೆಯ ಕಾರ್ಯದರ್ಶಿ ನೂರ್ ಫಾತಿಮಾ, ಆಡಳಿತ ಮಂಡಳಿಯ ಸದಸ್ಯರಾದ ಸಮೀರ್ ಬೇಗ್, ಹಾಲಿಮಾ ಸಾದಿಯಾ, ಸಿ.ಆರ್.ಪಿ. ಪುಟ್ಟಣ್ಣಯ್ಯ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಹೆಚ್.ಆರ್. ಮತ್ತು ಶಾಲೆಯ ಅಧ್ಯಾಪಕ ವೃಂದದವರು, ಪೋಷಕರು ಉಪಸ್ಥಿತರಿದ್ದರು. ನಂತರ ಶಾಲೆಯ ಮಕ್ಕಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗಣ್ಯರು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು.